ಜಮೇಕ
ವೆಸ್ವ್ ಇಂಡೀಸ್ ಗುಂಪಿನಲ್ಲಿರುವ ಸ್ವತಂತ್ರ ದ್ವೀಪ. ಕ್ಯಾರಿಬೀಯನ್ ಸಮುದ್ರದಲ್ಲಿರುವ ಇದರ ಉತ್ತರಕ್ಕೆ ಕ್ಯೂಬ (95 ಮೈ.ದೂರ) ಪೂರ್ವಕ್ಕೆ ಹೇಟೀ ದ್ವೀಪಗಳಿವೆ. ಉ.ಅ.17( 43' ಮತ್ತು 18( 32' ಹಾಗೂ ಪ.ರೇ.76( 11' ಮತ್ತು 78( 21' ಮಧ್ಯದಲ್ಲಿದೆ. ಪೂರ್ವಪಶ್ಚಿಮವಾಗಿ ಸು. 145ಮೈ. ಉದ್ದವಿರುವ ಇದರ ಒಟ್ಟು ವಿಸ್ತೀರ್ಣ 4,243 ಚ.ಮೈ. ಜನಸಂಖ್ಯೆ 18,61,300 (1970). ರಾಜಧಾನಿ ಕಿಂಗ್‍ಸ್ಟನ್ (192000).

	ಜಮೇಕದ ಬಹುಪಾಲು ಪ್ರದೇಶ ಟರ್ಷಿಯರಿ ಯುಗದ ನಿಕ್ಷೇಪಗಳಿಂದ ಕೂಡಿದೆ. ಈಶಾನ್ಯದ ಬ್ಲೂ ಪರ್ವತ ಪ್ರದೇಶದಲ್ಲಿ ಪುರಾತನ ಶಿಲೆಗಳಿವೆ. ಬ್ಲೂ ಪರ್ವತದ ಎತ್ತರ 7,402. ಇದರ ಪೂರ್ವಕ್ಕೆ ಜಾನ್ ಕ್ರೌ (ಬ್ಲೇಕ್) ಪರ್ವತ ಪ್ರದೇಶವಿದೆ. ಇದು ಸುಣ್ಣಶಿಲೆಗಳಿಂದ ಕೂಡಿದ ತಪ್ಪಲು ಪ್ರದೇಶ (ಎತ್ರರ ಸು.3,800) ಜಮೇಕದ 3/4 ಭಾಗ ಸುಣ್ಣ ಶಿಲೆಗಳ ಪ್ರದೇಶ. ಇಲ್ಲಿ ಸಾಕಷ್ಟು ದಿಣ್ಣೆಗಳು. ಕೊಳ್ಳಗಳು ಹಾಗೂ ಇಂಗುಕುಳಿಗಳು (ಸಿಂಕ್ ಹೋಲ್ಸ್) ಉಂಟು. ದಟ್ಟನೆಯ ಹಸಿರು ಕಾಡು ಆವರಿಸಿದ ಜಾನ್ ಕ್ರೌ ಪರ್ವತ ಪ್ರದೇಶದಲ್ಲಿ ಅನೇಕ ಝರಿಗಳು, ನದಿಗಳು, ನೀರಿನ ಬುಗ್ಗೆಗಳು ಇವೆ. ಅಲ್ಲಲ್ಲಿ ಜ್ವಾಲಾಮುಖಿಗಳನ್ನೂ ಬಿಸಿನೀರಿನ ಬುಗ್ಗೆಗಳನ್ನೂ ಕಾಣಬಹುದು. ಜಮೇಕದ ಬಹುಪಾಲು ನದಿಗಳು ಸಾರಿಗೆಗೆ ಅನುಕೂಲವಾಗಿಲ್ಲ. ಕಪ್ಪು ನದಿಯಲ್ಲಿ ಮುಖದ ಬಳಿಯಿಂದ ಕೇವಲ 25 ಮೈ. ದೂರ ನೌಕೆಗಳ ಯಾನ ಸಾಧ್ಯ. ಪೋರ್ಟ್ ಮರ್ಯಾಂಟ್, ಕಿಂಗ್‍ಸ್ಟನ್, ಓಲ್ಡ್ ಹಾರ್ಬರ್, ಮಾಂಟೀಗೋ ಬೇ, ಫ್ಯಾಲ್‍ಮತ್, ಪೋರ್ಟ್ ಆಂಟೆನಿಯೋ-ಇವು ಇಲ್ಲಿಯ ಕೆಲವು ಪ್ರಸಿದ್ಧ ಬಂದರುಗಳು.

	ಜುಮೇಕದ ವಾಯುಗುಣದಲ್ಲಿ ಪ್ರಾದೇಶಿಕವಾಗಿ ವ್ಯತ್ಯಾಸಗಳುಂಟು. ಸಮುದ್ರ ಪಾತಳಿಯ ಪ್ರದೇಶದಲ್ಲಿ ಉಷ್ಣವಲಯದ ವಾಯಗುಣ ಇದ್ದರೆ ಎತ್ತರದ ಉತ್ತರ ನಾಡಿನಲ್ಲಿ ಸಮಶೀತೋಷ್ಣ ವಾಯುಗುಣ ಇದೆ. ಸಾಮಾನ್ಯವಾಗಿ ಇಲ್ಲಿಯ ಉಷ್ಣತೆಯಲ್ಲಿ ಶ್ರಾಯೀಣ ವ್ಯತ್ಯಾಸಗಳು ಕಡಿವೆ. ಚಳಿಗಾಲದ ಉಷ್ಣತೆ 75 ಫ್ಯಾ. ಬೇಸಗೆಯಲ್ಲಿ ಅದು ಕೇವಲ ಸು 80 ಫ್ಯಾ.ಗೆ ಏರುತ್ತದೆ. ಜಮೇಕದ ದಕ್ಷಿಣ ತೀರದಲ್ಲಿರುವ ಕಿಂಗ್‍ಸ್ಟನಿನ ವಾರ್ಷಿಕ ಸರಾಸರಿ ಉಷ್ಣತೆ 80 ಫ್ಯಾ. ಇಲ್ಲಿಯ ವಾರ್ಷಿಕ ಸರಾಸರಿ ಮಳೆ 77. ಆದರೆ ಉತ್ತರ ತೀರದಿಂದ ದಕ್ಷಿಣ ತೀರದ ವರೆಗೆ ಮಳೆಯ ಪರಿಮಾಣ ಬಲು ವ್ಯತ್ಯಾಸವಾಗುತ್ತದೆ. ಈಶಾನ್ಯದಲ್ಲಿರುವ ಬ್ಲೂ ಪರ್ವತ ಪ್ರದೇಶದಲ್ಲಿ 200 ಆದರೆ, ದಕ್ಷಿಣದ ಕಿಂಗ್‍ಸ್ಟನ್ ಸುತ್ರಣ ಪ್ರದೇಶದ ವಾರ್ಷಿಕ ಮಳೆ ಕೇವಲ 33. ಮೇ-ಅಕ್ಟೋಬರ್ ಸಾಮಾನ್ಯವಾಗಿ ಹೆಚ್ಚು ಮಳೆ ಬೀಳುವ ಕಾಲ. ಆಗಸ್ಟ್-ನವಂಬರ್‍ಗಳಲ್ಲಿ ಚಂಡಮಾರುತ ಬೀಸುತ್ತದೆ. ಜಮೇಕ ಅನೇಕ ಸಲ ಇದಕ್ಕೆ ಬಲಿಯಾಗಿದೆ.

	ಜಮೇಕದಲ್ಲಿಯ ಬಹುಪಾಲು ಕಾಡನ್ನು ಕಡಿದುಹಾಕಲಾಗಿದೆ. ಈಶಾನ್ಯ ಪ್ರದೇಶದಲ್ಲಿ ನೈಸರ್ಗಿಕ ಕಾಡು ಸ್ವಲ್ಪಮಟ್ಟಿಗೆ ಉಳಿದುಬಂದಿದೆ. ಇಲ್ಲಿ ಬಿದಿರು, ಎಬೊನಿ, ಮಹಾಗನಿ, ಕರಿಮರ ಬೆಳೆಯುತ್ತವೆ. ದಕ್ಷಿಣ ಪ್ರದೇಶದಲ್ಲಿ ಒಣನಾಡಿನ ಕುರುಚಲು ಗಿಡಗಳು ಬೆಳೆಯುತ್ತವೆ. ಈಗ ಸರ್ಕಾರ ಮತ್ತೆ ಕಾಡು ಬೆಳೆಸುವುದರ ಕಡೆ ಗಮನವೀಯುತ್ತದೆ. ಪ್ರತಿವರ್ಷ ಸುಮಾರು 500 ಎಕರೆ ಪ್ರದೇಶದಲ್ಲಿ ಕಾಡನ್ನು ವಿಸ್ತರಿಸಲಾಗುತ್ತಿದೆ. ಇಲ್ಲೆಲ್ಲ ಪೈನ್, ನೀಲಗಿರಿ, ದೇವದಾರು ಮತ್ತು ಮಹಾಗನಿ ಗಿಡಗಳನ್ನು ನೆಡಲಾಗುತ್ತಿದೆ. ಕಾಡುಹಂದಿ ಇಲ್ಲಿಯ ಕೆಲವೇ ಮೂಲವಾಸಿ ಸಸ್ತನಿಗಳಲ್ಲೊಂದು, ಇಲ್ಲಿಯ ಬಹುಪಾಲು ಪ್ರಾಣಿಗಳು ಐರೋಪ್ಯ ವಲಸೆಗಾರರೊಂದಿಗೆ ಬಂದವು. ಉರಗಗಳು, ಹಲ್ಲಿಗಳು ಅಪಾರ ಸಂಖ್ಯೆಯಲ್ಲಿವೆ. ಹಕ್ಕಿಗಳಿಗಂತೂ ಕೊರತೆಯೇ ಇಲ್ಲ.

	ಗಣಿ ಉದ್ಯಮದಲ್ಲಿ ಜಮೇಕ ತುಂಬ ಪ್ರಮುಖವಾದ ದೇಶ. ಜಗತ್ತಿನ ಬಾಕ್ಸೈಟ್ ಅದುರಿನ ಬಹು ದೊಡ್ಡ ನಿಕ್ಷೇಪ ಇರುವುದು ಇಲ್ಲಿಯೇ. 1963ರಲ್ಲಿ ಜಗತ್ತಿನ ಒಟ್ಟು ಬಾಕ್ಸೈಟ್ ಉತ್ಪಾದನೆಯಲ್ಲಿ ಜಮೇಕದ ಪಾಲೇ 25% ಆಗಿತ್ತು. ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡದ ಕಂಪನಿಗಳು ಇಲ್ಲಿಯ ಗಣಿ ಉದ್ಯಮದಲ್ಲಿ ಹೆಚ್ಚಿನ ಪಾಲು ಹೊಂದಿವೆ. 1952ರಲ್ಲಿ ಮೊದಲ ಬಾರಿಗೆ ಬಾಕ್ಸೈಟಿನ ರಪ್ತು ಪ್ರಾರಂಭವಾದರೂ ಇಂದು ಈ ಉದ್ಯಮವೇ ದೇಶದ ಆರ್ಥಿಕತೆಯಲ್ಲಿ ಮುಖ್ಯವಾದ್ದು. 1969ರಲ್ಲಿ ಬಾಕ್ಸೈಟ್ ಮತ್ತು ಅಲ್ಯೂಮಿನ ಅದುರಿನ ರಫ್ತಿನಿಂದ ಜಮೇಕಗಳಿಸಿದ ವಿದೇಶೀ ವಿನಿಮಯ ಅನುಕ್ರಮವಾಗಿ 4.84.20.000 ಮತ್ತು 6.95.90.000 ಜಮೇಕ ಡಾಲರುಗಳು. ಜಿಪ್ಸಮ್ ಇಲ್ಲಿಯ ಇನ್ನೊಂದು ಮುಖ್ಯ ಅದುರು. 1967ರಲ್ಲಿ 1.99.423 ಟನ್ ಜಿಪ್ಸಮ್ಮನ್ನು ರಪ್ತು ಮಾಡಲಾಯಿತು. ಬ್ಲೂ ಪರ್ವತ ಪ್ರದೇಶದಲ್ಲಿ ಒಳ್ಳೆಯ ಅಮೃತಶಿಲೆ ಸಿಗುತ್ತದೆ. ಇತ್ತೀಚಿಗೆ ತಾಮ್ರ, ಕಬ್ಬಿಣ ಹಾಗೂ ತೈಲ ನಿಕ್ಷೇಪಗಳ ಅನ್ವೇಷಣೆ ಪ್ರಾರಂಭವಾಗಿದೆ.

	ಇತಿಹಾಸ : 1494ರಲ್ಲಿ ಕ್ರಿಸ್ಟೋಫರ್ ಕೊಲಂಬಸ್ ಇದನ್ನು ಮೊದಲು ಗುರುತಿಸಿದ. 16ನೆಯ ಶತಕದ ಆದಿಯಲ್ಲಿ ಸ್ಪ್ಯಾನಿಷರು ಇಲ್ಲಿ ವಲಸೆ ಹೊಡಿದರು. ಅದಕ್ಕೂ ಮೊದಲೇ ಸು.1000ದಿಂದ ಇಲ್ಲಿ ನೆಲೆಯೂರಿದ್ದ ಆರಾವಾಕ್ ಇಂಡಿಯನರನ್ನು ಕ್ರಮೇಣ ಹೊರದೊಡಲಾಯಿತು. ತಮ್ಮ ದನದ ದೊಡ್ಡಿ ಹಾಗೂ ಇತರ ಕೆಲಸಗಳಿಗಾಗಿ ಸ್ಪ್ಯಾನಿಷರು ಆಫ್ರಿಕದಿಂದ ಇಲ್ಲಿಗೆ ಗುಲಾಮರನ್ನು ತಂದರು. 1665ರಲ್ಲಿ ಇಂಗ್ಲಿಷರು ಜಮೇಕವನ್ನು ವಶಪಡಿಸಿಕೊಂಡರು. ಆಗ ಇದರ ಜನಸಂಖ್ಯೆ ಕೇವಲ 3,000.

	1670ರ ವೇಳೆಗೆ ಬ್ರಿಟಿಷರು ಜಮೇಕದಲ್ಲಿ ಒಳ್ಳೆಯ ಆಡಳಿತ ಸ್ಥಾಪಿಸಿದರು. 1672ರಲ್ಲಿ ಗುಲಾಮಗಿರಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಬ್ರಿಟಿಷರ ಏಕಸ್ವಾಮ್ಯ ಏರ್ಪಟ್ಟು ರಾಯಲ್ ಆಫ್ರಿಕನ ಕಂಪನಿ ಎಂಬ ಸಂಸ್ಥೆ ಸ್ಥಾಪಿತವಾಯಿತು. ಅನಂತರ ಜಮೇಕ ಗುಲಾಮ ವ್ಯಾಪಾರದ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿತು. ಬ್ರಿಟಿಷರ ವಸಾಹತಾದ ಅನಂತರ ಜಮೇಕ ಆರ್ಥಿಕವಾಗಿ ಮುಂದುವರಿಯಿತು. ಹದಿನೇಳನೆಯ ಶತಮಾನದ ಉತ್ತರಾರ್ಧದಲ್ಲಿ ಜಮೇಕದಲ್ಲಿ 70 ಸಕ್ಕರೆ ತಯಾರಿಸುವ ಕೇಂದ್ರಗಳೂ 60 ಇಂಡಿಗೂ ಕೇಂದ್ರಗಳೂ 60 ಕೋಕೋ ಕೇಂದ್ರಗಳೂ ಇದ್ದುವು. ಜಮೇಕದಲ್ಲಿ ಬ್ರಿಟಿಷ್ ಕಾನೂನುಗಳು ಜಾರಿಗೆ ಬಂದು ವರ್ಷಂಪ್ರತಿ 8,000 ಪೌಂಡುಗಳನ್ನು ಚಕ್ರವರ್ತಿಗೆ ಸಲ್ಲಿಸಬೇಕೆಂದು ನಿಗದಿಯಾಗಿತ್ತು. 1692ರ ಭೂಕಂಪದಲ್ಲಿ ಜಮೇಕದ ಮುಖ್ಯ ಪಟ್ಟಣವಾದ ಪೋರ್ಟ್ ರಾಯಲ್‍ನ ಹೆಚ್ಚು ಭಾಗ ನಾಶವಾಯಿತು. ಅಲ್ಲಿ ಕಿಂಗ್‍ಸ್ಟನ್ ಎಂಬ ಹೊಸ ಪಟ್ಟಣವನ್ನು ಕಟ್ಟಿ ಆಡಳಿತ ಕೇಂದ್ರವನ್ನಾಗಿ ಮಾಡಿಕೊಳ್ಳಲಾಯಿತು.

1782ರಲ್ಲಿ ಸ್ಪೇನ್ ಮತ್ತು ಫ್ರಾನ್ಸ್ ದೇಶಗಳು ಜಮೇಕದಿಂದ ಬ್ರಿಟಿಷರನ್ನು ಓಡಿಸಲು ಪ್ರಯತ್ನಪಟ್ಟು ಸೋತುವು. 1806ರಲ್ಲಿ ಫ್ರೆಂಚರು ಪುನಃ ಜಮೇಕವನ್ನು ಆಕ್ರಮಿಸಲು ವಿಫಲ ಪ್ರಯತ್ನ ನಡೆಸಿದರು. ಆ ವೇಳೆಗೆ ಜಮೇಕ ಆರ್ಥಿಕವಾಗಿ ವಿಶೇಷ ಪ್ರಗತಿ ಸಾಧಿಸಿತ್ತು. ಅಲ್ಲಿ 3,00,000 ಮಂದಿ ಗುಲಾಮರಿದ್ದರು. ಕಾಫಿ ಮತ್ತು ಸಕ್ಕರೆಯ ಉತ್ಪಾದನೆ ವಿಶೇಷವಾಗಿ ಅಧಿಕವಾಗಿ, ಹೆಚ್ಚು ಭಾಗವನ್ನು ಹೊರದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. 1807ರಲ್ಲಿ ಗುಲಾಮ ವ್ಯಾಪಾರವನ್ನೂ 1834ರಲ್ಲಿ ಗುಲಾಮಗಿರಿಯನ್ನೂ ನಿಷೇಧಿಸುವ ಕಾನೂನುಗಳು ಬಂದು ಜಮೇಕದ ಆರ್ಥಿಕತೆಯ ಮೇಲೆ ವಿಪರೀತ ಪರಿಣಾಮ ಬೀರಿದುವು. ಪ್ಲಾಂಟೇಷನ್ ಆದಾಯ ಕುಸಿದು ಬಿತ್ತು. 1838ರ ವೇಳೆಗೆ ಗುಲಾಮರನ್ನು ಸ್ವತಂತ್ರ ಗೊಳಿಸಲಾಯಿತು. ವಿಮೋಚನೆ ಹೊಂದಿದ ಪ್ರತಿ ವ್ಯಕ್ತಿಗೂ 19 ಪೌಂಡುಗಳಂತೆ ಸಹಾಯ ಧನ ಕೊಡಲಾಯಿತು. ಗುಲಾಮಗಿರಿಯಿಂದ ಮುಕ್ತವಾದ ಹೆಚ್ಚು ಮಂದಿ ಬೆಟ್ಟ ಪ್ರದೇಶಗಳತ್ತ ಹೋಗಿ ಸ್ವಂತ ಬೇಸಾಯದಲ್ಲಿ ತೊಡಗಿದ್ದರು. ಇಂದಿಗೂ ಅವರ ವಂಶಸ್ಥರು ಚಿಕ್ಕ ತೋಟಗಳಲ್ಲಿ ಲಾಭದಾಯಕವಾಗಿ ಬೇಸಾಯ ಮಾಡಿಕೊಂಡಿದ್ದಾರೆ.

       ಕಾರ್ಯಾಂಗ ಮತ್ತು ಶಾಸಕಾಂಗಗಳ ಮಧ್ಯೆ ಆಡಳಿತ ನೀತಿಯ ಬಗ್ಗೆ ಒಡಕು ತಲೆದೋರಿತು. ಸರ್ ಚಾಲ್ರ್ಸ್ ಮೆಟ್ಕಾಫ್ ಮತ್ತು ಅರ್ಲ್ ಆಫ್ ಎಲ್ಗಿನ್ನರು ಜಮೇಕದ ರಾಜ್ಯಪಾಲರಾಗಿದ್ದಾಗ ದೇಶದ ಆಂತರಿಕ ಸ್ಥಿತಿಗಳನ್ನು ಉತ್ತಮ ಪಡಿಸಲು ಹಲವು ಸುಧಾರಣೆಗಳನ್ನು ಜಾರಿಗೆ ತಂದರು. ಭಾರತದಿಂದ ವಲಸೆ ಬರುವವರಿಗೆ ಪ್ರೋತ್ಸಾಹ ನೀಡಿದರು; ರೈಲುಮಾರ್ಗಗಳನ್ನು ಸ್ಥಾಪಿಸಿದರು. ಹೀಗೆ ಪ್ಲಾಂಟೇಷನ್‍ಗಳಲ್ಲಿ ಕೆಲಸಗಾರರ ಕೊರತೆಯನ್ನು ನೀಗಿಸಲು ಪ್ರಯತ್ನಿಸಿದರು. ಆದರೆ ಬಡತನ, ತೆರಿಗೆಯ ಹೊರೆಮತ್ತು ನ್ಯಾಯಾಂಗದ ಅಸಮರ್ಪಕತೆಯಿಂದ ಜಮೇಕದಲ್ಲಿ ಚಳವಳಿಯ ವಾತಾವರಣ ಮೂಡಿತು. 1865ರಲ್ಲಿ ಮರ್ಯಾಂಟ್ ಬೇಯಲ್ಲಿ ನಡೆದ ದಂಗೆಯಲ್ಲಿ ಒಬ್ಬ ನ್ಯಾಯಾಧೀಶ ಮತ್ತು 18 ಮಂದಿ ಬಿಳಿಯರು ಕೊಲೆಯಾದರು. ದಂಗೆಯನ್ನು ಉಗ್ರವಾಗಿ ಹತ್ತಿಕ್ಕಿತು. ಈ ಉಗ್ರ ದಂಡನೆಯ ಪರಿಣಾಮ ಇಡೀ ವೆಸ್ಟ್ ಇಂಡೀಸ್‍ನಲ್ಲಿ ಪರಿಣಾಮ ಬೀರಿತು. ಇಂಗ್ಲೆಂಡಿನಲ್ಲಿ ಹಲವರು ಈ ಉಗ್ರ ದಮನ ನೀತಿಯನ್ನು ಖಂಡಿಸಿದರು. ಈ ಕಾರಣದಿಂದ ಅಲ್ಲಿಯ ರಾಜ್ಯಪಾಲನನ್ನು ಬ್ರಿಟಿಷ್ ಸರ್ಕಾರ ಹಿಂದಕ್ಕೆ ಕರೆಸಿಕೊಂಡು ಜಮೇಕ ದ್ವೀಪದ ಆಡಳಿತ ನೀತಿಯಲ್ಲಿ ಸುಧಾರಣೆಗಳನ್ನು ಆಚರಣೆಗೆ ತಂದಿತು.

	1866ರಲ್ಲಿ ಜಾನ್ ಪೀಟರ್ ಗ್ರ್ಯಾಂಟನನ್ನು ಜಮೇಕದ ರಾಜ್ಯಪಾಲನಾಗಿ ಬ್ರಿಟಿಷ್ ಸರ್ಕಾರ ನೇಮಿಸಿತು. ಪೀಟರ್ ಗ್ರ್ಯಾಂಟ್ ಅನೇಕ ಉಪಯುಕ್ತ ಸುಧಾರಣೆಗಳನ್ನು ಜಾರಿಗೆ ತಂದ. ಹಳೆಯ ನ್ಯಾಯಾಂಗದಲ್ಲಿ ನ್ನೂನತೆಗಳಿದ್ದದ್ದರಿಂದ ಅದನ್ನು ರದ್ದುಗೊಳಿಸಿ ಐರ್ಲೆಂಡಿನಲ್ಲಿ ಆಚರಣೆಯಲ್ಲಿದ್ದ ನ್ಯಾಯಂಗ ಪದ್ದತಿಯನ್ನು ಇಲ್ಲಿಯೂ ಜಾರಿಗೆ ತರಲಾಯಿತು. ಸಾರ್ವಜನಿಕ ವೈದ್ಯಕೀಯ ಸೌಲಭ್ಯ, ಲೋಕೋಪಯೋಗಿ ಇಲಾಖೆ, ಸರ್ಕಾರಿ ಉಳಿತಾಯ ಬ್ಯಾಂಕ್-ಇವುಗಳ ಸ್ಥಾಪನೆಯಾಯಿತು. ವಿದ್ಯಾಭ್ಯಾಸ ಸೌಲಭ್ಯವನ್ನು ವಿಸ್ತರಿಸಲಾಯಿತು. ವ್ಯವಸಾಯಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಯಿತು. ಪೀಟರ್ ಗ್ರ್ಯಾಂಟನ ಆಳ್ವಿಕೆಯ ಕಾಲದಲ್ಲಿ ಜಮೇಕದಲ್ಲಿ ಕ್ಯಾಪ್ಟನ್ ಎ.ಡಬ್ಲ್ಯು. ಬೇಕರ್ ಎಂಬವನು ಬಾಳೆಹಣ್ಣಿನ ವ್ಯಾಪಾರವನ್ನು ಪ್ರಾರಂಭಿಸಿದ. ಅನಂತರ ಅವನು ಸ್ಥಾಪಿಸಿದ ಬಾಳೆಹಣ್ಣಿನ ವ್ಯಾಪಾರ ಸಂಸ್ಥೆ ಯುನೈಟೆಡ್ ಫ್ರೂಟ್ ಕಂಪನಿ ಎಂಬ ಹೆಸರಿನಿಂದ ಪ್ರಸಿದ್ಧಿಗೆ ಬಂತು. ಬಾಳೆಯನ್ನು ಚಿಕ್ಕ ಮತ್ತು ದೊಡ್ಡ ತೋಟಗಳಲ್ಲೆಲ್ಲ ವಿಶೇಷವಾಗಿ ಬೆಳೆಯುವಂತಾಗಿ ಲಾಭದಾಯಕವಾಗಿ ರಫ್ತು ಮಾಡುವಂತಾಯಿತು.

	1907ರಲ್ಲಿ ರಾಜಧಾನಿಯಾದ ಕಿಂಗ್‍ಸ್ಪನ್ ತೀವ್ರ ಭೂಕಂಪಕ್ಕೆ ತುತ್ತಾಯಿತು. ಪಟ್ಟಣದ ಅನೇಕ ಕಟ್ಟಡಗಳು ಹಾಳಾದುವು. ಬಹುಭಾಗ ಸುಟ್ಟುಹೋಯಿತು. ಆಗ ಸತ್ತವರ ಸಂಖ್ಯೆ ಸು.800. ಹಾಳುಬಿದ್ದಿದ್ದ ಕಿಂಗ್‍ಸ್ಟನ್ ನಗರವನ್ನು ರಾಜ್ಯಪಾಲ ಸರ್ ಸಿಡ್ನಿ ಆಲಿವರನ ಕಾಲದಲ್ಲಿ ಆಧುನಿಕವಾಗಿ ಪುನಃ ಕಟ್ಟಲಾಯಿತು. ಬೃಹತ್ ಕಟ್ಟಡಗಳಿಂದಲೂ ವಿಶಾಲ ಬೀದಿಗಳಿಂದಲೂ ಉದ್ಯಾನಗಳಿಂದಲೂ ಕಿಂಗ್‍ಸ್ಟನ್ ಪಟ್ಟಣ ಶೋಭಿಸತೊಡಗಿತು.

	1884ರಲ್ಲಿ ಪ್ರಜಾಪ್ರತಿನಿಧಿ ಸರ್ಕಾರವನ್ನು ಪ್ರಾರಂಭಿಸಲಾಯಿತು. 9 ಮಂದಿ ಚುನಾಯಿತ ಪ್ರತಿನಿಧಿಗಳನ್ನು ಶಾಸಕಾಂಗಕ್ಕೆ ತೆಗೆದುಕೊಳ್ಳಲಾಯಿತು. 1895ರ ವೇಳೆಗೆ ಚುನಾಯಿತ ಪ್ರತಿನಿಧಿಗಳ ಸಂಖ್ಯೆಯನ್ನು 14ಕ್ಕೆ ಏರಿಸಲಾಯಿತು. 1922 ಮತ್ತು 1926ರಲ್ಲಿ ಅನೇಕ ಸುಧಾರಣೆಗಳನ್ನು ತರಲಾಯಿತು. 1944ರಲ್ಲಿ ಜಾರಿಗೆ ಬಂದ ಸಂವಿಧಾನದ ಪ್ರಕಾರ ವಯಸ್ಕ ಪ್ರಜೆಗಳಿಂದ ಚುನಾಯಿತರಾದ ಸದಸ್ಯರನ್ನುಳ್ಳ ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಲಾಯಿತು. ಕ್ರಮೇಣ ಎರಡು ರಾಜಕೀಯ ಪಕ್ಷಗಳಿಂದ ಕೂಡಿದ ವ್ಯವಸ್ಥೆ ರೂಪುಗೊಂಡಿತು. 1953ರ ಸುಧಾರಣೆಯ ಪ್ರಕಾರ ಸರ್ಕಾರದ ಇಲಾಖೆಗಳನ್ನು ಚುನಾಯಿತರಾದ ಸಚಿವರು ವಹಿಸಿಕೊಂಡರು. ನಾಮಕರಣ ಸದಸ್ಯರಿಂದ ಕೂಡಿ ಪರಿಮಿತ ಅಧಿಕಾರ ಹೊಂದಿದ್ದ ವಿಧಾನ ಪರಿಷತ್ತು. ಉತ್ನತ ಅಧಿಕಾರಿಗಳು ಮತ್ತು ಸಚಿವರಿಂದ ಕೂಡಿದ ಕಾರ್ಯಾಂಗ-ಇವು ರಾಜ್ಯಪಾಲನ ಅಧ್ಯಕ್ಷತೆಯಲ್ಲಿ ಆಡಳಿತ ನಡೆಸುವ ಏರ್ಪಾಡಾಯಿತು. ಅಧಿಕಾರ ವರ್ಗದ ಸದಸ್ಯರನ್ನು ಕಾರ್ಯಾಂಗದಿಂದ ತೆಗೆದು ಹಾಕಿ ಮುಖ್ಯಮಂತ್ರಿಯ ನಾಯಕತ್ವದ ಸಂಪುಟ ಪದ್ಧತಿಯ ಮಂತ್ರಿಮಂಡಳವನ್ನು ಸ್ಥಾಪಿಸಲಾದ್ದು 1957ರಲ್ಲಿ. ಪ್ರಪಂಚದ ಎರಡು ಮಹಾಯುದ್ಧಗಳಲ್ಲೂ ಜಮೇಕನರು ಬ್ರಿಟಿಷ್ ಸೇನೆಯಲ್ಲಿ ಸೈನಿಕರಾಗಿ ಯುದ್ಧದಲ್ಲಿ ಪಾಲ್ಗೊಂಡರೂ ಜಮೇಕ ಯುದ್ಧಕ್ಕೆ ಸೇರಲಿಲ್ಲ. ಎರಡನೆಯ ಮಹಾಯುದ್ಧಾನಂತರ ವಸಾಹತು ಅಭಿವೃದ್ಧಿ ಮತ್ತು ಕಲ್ಯಾಣ ಅಧಿನಿಯಮಗಳ ಅಡಿಯಲ್ಲಿ ಜಮೇಕ ವಿಶೇಷ ಅಭಿವೃದ್ಧಿ ಹೊಂದಿತು. 1947ರಲ್ಲಿ ಇದೇ ಅಧಿನಿಯಮದ ಪ್ರಕಾರ ವೆಸ್ಟ್ ಇಂಡೀಸ್ ವಿಶ್ವವಿದ್ಯಾಲಯ ಜಮೇಕದಲ್ಲಿ ಸ್ಥಾಪಿತವಾಯಿತು.

	ಅನೇಕ ಕ್ಯಾರಿಬೀಯನ್ ದ್ವೀಪಗಳು ಸೇರಿ ಒಟ್ಟಾಗಿ ಸ್ಥಾಪಿಸಿಕೊಂಡಿದ್ದ ವೆಸ್ಟ್ ಇಂಡೀಸ್ ಒಕ್ಕೂಟವನ್ನು 1958ರ ಜನವರಿ 3ರಂದು ಜಮೇಕ ಸೇರಿತು. 1959ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪೀಪಲ್ಸ್ ನ್ಯಾಷನಲಿಸ್ಟ್ ಪಕ್ಷದ ಮುಖಂಡನಾದ ನಾರ್ಮನ್ ಮ್ಯಾನ್ಲಿ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ. ಆದರೆ 1960ರಲ್ಲಿ ಜಮೇಕ ಲೇಬರ್ ಪಕ್ಷದ ನಾಯಕನಾದ ಅಲೆಕ್ಸಾಂಡರ್ ಬಸ್ಟ್ ಮಂಟ್ ಒಕ್ಕೂಟದಿಂದ ಜಮೇಕ ಹಿಂದಿರುಗಬೇಕೆಂದು ಚಳವಳಿ ಹೊಡಿದ. ಈ ಚಳವಳಿಗೆ ಹೆಚ್ಚು ಪುರಸ್ಕಾರ ದೊರೆಯಿತು. 1962ರ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷ ವಿಜಯಗಳಿಸಿ ಬಸ್ಟ್ ಮಂಟ್ ಪ್ರಧಾನಮಂತ್ರಿಯಾದ. ಅದೇ ವರ್ಷ ವೆಸ್ಟ್ ಇಂಡೀಸ್ ಒಕ್ಕೂಟದಿಂದ ಜಮೇಕ ಹೊರಬಂತು. 1962ರ ಆಗಸ್ಟ್ 6ರಂದು ಜಮೇಕ ಸ್ವತಂತ್ರ ರಾಷ್ಟ್ರವಾಗಿ ಕಾಮನ್‍ವೆಲ್ತ್ ಒಕ್ಕೂಟ ಸೇರಿತು.					   (ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ